ಟ್ರಿಪೊಲಿ 2

ಲೆಬನನ್ ಗಣರಾಜ್ಯದ ಒಂದು ನಗರ. ಮೆಡಿಟರೇನಿಯನ್ ತೀರದಲ್ಲಿರುವ ರೇವುಪಟ್ಟಣ, ಉತ್ತರ ಲೆಬನನ್ ಮುಹಾಫeóÁದ (ಪ್ರಾಂತ್ಯ) ಆಡಳಿತ ಕೇಂದ್ರ. ಬೇರೂತ್ ನಗರದ ಉತ್ತರ ಈಶಾನ್ಯಕ್ಕೆ 40 ಮೈ. (64ಕಿಮೀ.) ದೂರದಲ್ಲಿದೆ. ಜನಸಂಖ್ಯೆ 1,50,000 (1972). ನಗರದಲ್ಲಿ ಎರಡು ಖಚಿತ ವಿಭಾಗಗಳಿವೆ. ಮುಖ್ಯವಾದ  ಪಟ್ಟಣದ ವಿಭಾಗದ ನಡುವೆ ಅಬು ಅಲಿ ನದಿ ಹರಿಯುತ್ತದೆ. ಅಲ್ ಮಿನ ರೇವುಪಟ್ಟಣದ್ದು ಇನ್ನೊಂದು ವಿಭಾಗ. ಕಿತ್ತಳೆ ವನಗಳ ಮೂಲಕ ಸಾಗುವ ವಿಶಾಲ ರಸ್ತೆಗಳು ಇವೆರಡು ಭಾಗಗಳನ್ನು ಕೂಡಿಸುತ್ತವೆ. ಟೈಲಾನ್ ಮಸೀದಿ (1336), ಸೇಂಟ್ ಮೇರಿ ದ ಲ ಟ್ಯೂಟ್ ಚರ್ಚಿನ ಅವಶೇಷದ ಮೇಲೆ ನಿರ್ಮಿಸಲಾದ ದೊಡ್ಡ ಮಸೀದಿ (1294), ಮೂರ್ ಶೈಲಿಯ ಸಿದಿ ಅಬ್ದುಲ್-ವಹಾದ್ ಮಸೀದಿ (1305), ಬಹುಶಃ 15ನೆಯ ಶತಮಾನದ ಅಂತ್ಯದಲ್ಲಿ ಬಂದರಿನ ರಕ್ಷಣೆಗಾಗಿ ಕಟ್ಟಿದ ಕಾವಲು ಗೋಪುರ-ಇವು ಇಲ್ಲಿಯ ಕೆಲವು ಪ್ರಮುಖ ಕಟ್ಟಡಗಳು

	ಇಲ್ಲಿಯ ಪ್ರಮುಖ ಉದ್ಯಮಗಳು ತೈಲಶುದ್ಧೀಕರಣ, ಸಾಬೂನು ತಯಾರಿಕೆ, ಸ್ಪಂಜ್ ಮೀನುಗಾರಿಕೆ, ನೇಯ್ಗೆ, ಧರ್ಮ ಹದಗಾರಿಕೆ, ಹೊಗೆಸೊಪ್ಪು ಮತ್ತು ಹಣ್ಣು ಬೇಸಾಯ. ಇರಾಕ್ ದೇಶದ ಕಿರ್ಕುಕ್‍ನಿಂದ ಬರುವ ಎಣ್ಣೆ ಕೊಳವೆ ಈ ನಗರದಲ್ಲಿ ಕೊನೆಗೊಳ್ಳುತ್ತದೆ. ಇಲ್ಲಿ ದೊಡ್ಡ ತೈಲಶುದ್ಧೀಕರಣ ಕೇಂದ್ರವಿದೆ. ಕಿತ್ತಳೆ, ನಿಂಬೆ ಮೊದಲಾದ ಹಣ್ಣುಗಳು, ಸಾಬೂನು, ಧರ್ಮ, ಉಣ್ಣೆ, ಹತ್ತಿ, ಮೊಟ್ಟೆ ಮೊದಲಾದವು. ಇಲ್ಲಿಂದ ರಫ್ತಾಗುತ್ತವೆ.
(ಜೆ.ಎಸ್.ಎಸ್.)

	ಇತಿಹಾಸ : ಟ್ರಿಪೊಲಿ ನಗರ ಪ್ರಖ್ಯಾತವಾಗಿರುವುದು ಅದರ ಗ್ರೀಕ್ ಹೆಸರಿನಿಂದಲೇ. ಕ್ರಿ. ಪೂ. 700ರ ತರುವಾಯ ಇದು ಸ್ಥಾಪಿತವಾಯಿತು. ಪರ್ಷಿಯನ್ ಕಾಲದಲ್ಲಿ ಇದು ಸಿಡನ್, ಟೈರ್ ಮತ್ತು ಆರ್ವಾದ್ ಎಂಬ ಮೂರು ಫಿನಿಷಿಯನ್ ನಗರಗಳ ಕೂಟವಾದ ಟ್ರಿಪೊಲಿಸ್‍ನ ರಾಜಧಾನಿಯಾಗಿತ್ತು. ಈ ಮೂರರಲ್ಲಿ ಒಂದೊಂದಕ್ಕೂ ಈ ತ್ರಿಪುರದಲ್ಲಿ ಒಂದೊಂದು ವಿಭಾಗವಿತ್ತು. ಸೆಲ್ಯೂಸಿಡರು ಮತ್ತು ರೋಮನರು ಈ ನಗರವನ್ನು ವಿಸ್ತರಿಸಿದರು. 638ರಲ್ಲಿ ಇದು ಮುಸ್ಲಿಮರಿಗೆ ವಶವಾಯಿತು. ಒಂದನೆಯ ಧರ್ಮಯುದ್ಧದಲ್ಲಿ ಸೇಂಟ್ ಗಿಲ್ಸ್ ನ ರೈಮಂಡ್ ಈ ನಗರಕ್ಕೆ ಮುತ್ತಿಗೆ ಹಾಕಿದ. 1105ರಲ್ಲಿ ಅವನು ನಿಧನನಾದರೂ ಮುತ್ತಿಗೆ ಮುಂದುವರಿಯಿತು. 1109ರಲ್ಲಿ ಇದು ಕ್ರೈಸ್ತರ ವಶವಾಯಿತು. ಈ ನಗರದಲ್ಲಿದ್ದ ಸುಮಾರು ಒಂದು ಲಕ್ಷ ಸಂಪುಟಗಳ ಗ್ರಂಥಾಲಯ ಬೆಂಕಿಗೆ ಆಹುತಿಯಾಯಿತು. ಧರ್ಮಯುದ್ಧನಿರತರು ಈ ಪಟ್ಟಣವನ್ನು ಪುನಃ ನಿರ್ಮಿಸಿದರು. ಅನಂತರ ಇದು ಲ್ಯಾಟಿನ್ ಬಿಷಪ್ ಪೀಠವಾಯಿತು. ಉತ್ತರ ಸಿರಿಯ ಭಾಗದ ಕೈಗಾರಿಕಾ ಮತ್ತು ಶೈಕ್ಷಣಿಕ ಕೇಂದ್ರವಾಯಿತು.

	1289ರಲ್ಲಿ ಈಜಿಪ್ಟಿನ ಮಾಮಲೂಕ್ ಸುಲ್ತಾನ ಕಲವಾನ್ ಈ ನಗರವನ್ನು ವಶಪಡಿಸಿಕೊಂಡ. ಆಗ ಹಳೆಯ ನಿವೇಶನವೆಲ್ಲ ನಾಶವಾಗಿ ಈಗಿನ ಹೊಸ ನಿವೇಶನದಲ್ಲಿ ನಗರವನ್ನು ಪುನರ್ನಿರ್ಮಿಸಲಾಯಿತು. 1834ರಲ್ಲಿ ಈಜಿಪ್ಟು ಸಿರಿಯವನ್ನು ಗೆದ್ದಾಗ ಇದು ಕತೀಡ್ರಲ್‍ಗಳ ಆಡಳಿತ ಕೇಂದ್ರವಾಗಿತ್ತು. 1918ರಲ್ಲಿ ಬ್ರಿಟಿಷರು ಇದನ್ನು ಆಕ್ರಮಿಸಿಕೊಂಡರು. 1920ರಲ್ಲಿ ಗ್ರ್ಯಾಂಡ್ ಲಿಬಾನ್‍ನಲ್ಲಿ ಇದು ಅಂತರ್ಗತವಾಯಿತು. 1921ರಲ್ಲಿ ಬ್ರಿಟಿಷ್ ಮತ್ತು ಸ್ವತಂತ್ರ ಫ್ರೆಂಚ್ ಸೇನೆಗಳು ಇದನ್ನು ವಶಪಡಿಸಿಕೊಂಡುವು. ಇದು ಲೆಬನನ್ ಸ್ವತಂತ್ರ ಗಣರಾಜ್ಯದ ಅಂಗವಾದ್ದು 1941ರಲ್ಲಿ.
(ಎನ್.ಎ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ